ಕರ್ನಾಟಕದಲ್ಲಿ 4 ದಿನ ಭಾರೀ ಮಳೆ ಎಚ್ಚರಿಕೆ: ಬಿರುಗಾಳಿ, ಸಿಡಿಲು ಅರ್ಭಟ – ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ, ಬಿರುಗಾಳಿ ಹಾಗೂ ಸಿಡಿಲು ಎಚ್ಚರಿಕೆ. ಹಲವು ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಣೆ. ಮುಂಗಾರು ಕೂಡ ಮುಂಚಿತವಾಗಿ ಪ್ರವೇಶ ಸಾಧ್ಯತೆ.

ಕರ್ನಾಟಕ ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ, ಬಿರುಗಾಳಿ ಹಾಗೂ ಸಿಡಿಲಿನ ಅರ್ಭಟ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಂಗಾಳಕೊಲ್ಲೆಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಈ ಹವಾಮಾನ ಬದಲಾವಣೆ ಕಂಡುಬರುತ್ತಿದೆ ಎಂದು ಇಲಾಖೆ ತಿಳಿಸಿದೆ. ಮೇ 19ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಮಳೆ ತೀವ್ರತೆ ಹೆಚ್ಚಿರಲಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಹಗಲಿನ ವೇಳೆಯಲ್ಲಿ ತಾಪಮಾನ ಹೆಚ್ಚಾಗಿ ಬಿಸಿಲಿನ ಬೇಗೆ ಅನುಭವವಾಗಬಹುದು. ಆದರೆ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ವಿಶೇಷವಾಗಿ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ 40ರಿಂದ 50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಇದರೊಂದಿಗೆ ಗುಡುಗು, ಸಿಡಿಲು ಮತ್ತು ಸಾಧಾರಣದಿಂದ ಭಾರೀ ಮಳೆಯೂ ಸುರಿಯಲಿದೆ.

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು, ತುಮಕೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 64.5 ಮಿಮೀ ರಿಂದ 115.5 ಮಿಮೀ ವರೆಗೆ ಮಳೆಯಾಗುವ ನಿರೀಕ್ಷೆಯಿದೆ. ಈ ಪ್ರದೇಶಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇನ್ನೂ ಉತ್ತರ ಒಳನಾಡಿನ ರಾಯಚೂರು, ಯಾದಗಿರಿ, ವಿಜಯಪುರ, ಕಲಬುರಗಿ, ಗದಗ, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಹವಾಮಾನ ಪರಿಸ್ಥಿತಿ ಇನ್ನಷ್ಟು ತೀವ್ರವಾಗಲಿದೆ. ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆಯೂ ಸಂಭವಿಸಬಹುದು ಎಂದು ಸೂಚಿಸಲಾಗಿದೆ. ಈ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ.

ಕರಾವಳಿ ಭಾಗವಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರ ತೀರ ಪ್ರದೇಶಗಳಲ್ಲಿ ಗಾಳಿ ವೇಗ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಹೋಗುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

ಇದೇ ವೇಳೆ ಮುಂಗಾರು ಮಳೆಯು ಈ ವರ್ಷ ನಿರೀಕ್ಷೆಗಿಂತ ಬೇಗನೆ ಪ್ರವೇಶಿಸುವ ಲಕ್ಷಣಗಳು ಕಂಡುಬರುತ್ತಿವೆ. ಮೇ 26ರ ವೇಳೆಗೆ ಕೇರಳವನ್ನು ಮುಂಗಾರು ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಅಲ್ಲಿಂದ ವೇಗವಾಗಿ ಮುಂದುವರಿಯುತ್ತಿದೆ.

ಕೇರಳ ಪ್ರವೇಶಿಸಿದ ಒಂದು ವಾರದೊಳಗೆ ಕರ್ನಾಟಕಕ್ಕೂ ಮುಂಗಾರು ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ರಾಜ್ಯದ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವ ಸಾಧ್ಯತೆ ಇದೆ. ಆದರೆ ತೀವ್ರ ಮಳೆ ಹಾಗೂ ಬಿರುಗಾಳಿಯಿಂದ ಉಂಟಾಗುವ ಅಪಾಯಗಳನ್ನು ಮನಗಂಡು ಜನರು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

Scroll to Top